ಅಮೀರ್ ಆಲಿ, ಸೈಯದ್ 
	ಇಂಗ್ಲೆಂಡಿನ ಪ್ರೀವೀ ಕೌನ್ಸಿಲ್ಲಿನ ನ್ಯಾಯಾಧೀಶರಾದ ಮೊದಲನೆಯ ಭಾರತೀಯರು.

	ಇವರು ಬಂಗಾಲದ ಚಿನ್ಸುರಾ ಎಂಬ ಹಳ್ಳಿಯಲ್ಲಿ 1849ರಲ್ಲಿ ಜನಿಸಿದರು. ಕಲ್ಕತ್ತ ವಿಶ್ವವಿದ್ಯಾನಿಲಯದಿಂದ ಎಂ.ಎ., ಬಿ.ಎಲ್. ಪದವಿಗಳನ್ನು ಪಡೆದು, ಅನಂತರ ಕೆಲವು ವರ್ಷ ಕಲ್ಕತ್ತ ಹೈಕೋರ್ಟಿನಲ್ಲಿ ವಕೀಲಿ ನಡೆಸಿ, ಸರ್ಕಾರದ ಶಿಷ್ಯವೃತ್ತಿ ಪಡೆದು, ಕಾಯಿದೆ ಅಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. 1873ರಲ್ಲಿ ಬ್ಯಾರಿಸ್ಟರ್ ಆದರು. ಭಾರತಕ್ಕೆ ಬಂದು ವಕೀಲಿಯನ್ನು ಪ್ರಾರಂಭಿಸಿ ಅಪಾರ ಕೀರ್ತಿಗಳಿಸಿದ್ದಲ್ಲದೆ 1874ರಿಂದ 1878ರ ವರೆಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮಹಮ್ಮದೀಯ ಕಾಯಿದೆಯ ಪ್ರಾಧ್ಯಾಪಕರಾಗಿದ್ದರು. 1878ರಲ್ಲಿ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ರಾಗಿಯೂ 1881ರಲ್ಲಿ ಚೀಫ್ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟರಾಗಿಯೂ ನೇಮಕ ಹೊಂದಿದರು. ಸ್ವಲ್ಪ ಕಾಲದಲ್ಲಿ ಆ ಹುದ್ದೆಗೆ ರಾಜಿನಾಮೆಯಿತ್ತು ಪುನಃ ವಕೀಲಿ ಪ್ರಾರಂಭಿಸಿದರು. 1883ರಲ್ಲಿ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‍ನ ಸದಸ್ಯರಾಗಿ ನೇಮಕ ಹೊಂದಿದರು. ಆ ಕಾಲಕ್ಕೆ ಮೆಮನ್ ಮೊದಲಾದ ಪಂಗಡದ ಮುಸ್ಲಿಮರಿಗೆ ಕುರಾನ್ ವಿರುದ್ಧವಾದ, ಆದರೆ ಅವರ ಪೂರ್ವಜರಿಂದ ಬಂಧ, ವಾರಸಾ ಮೊದಲಾದ ಕಾಯಿದೆಗಳು ಜಾರಿಯಲ್ಲಿದ್ದವು. ದೋಷಯುಕ್ತವಾದ ಆ ಕಾಯಿದೆಯನ್ನು ಬಿಟ್ಟು ಸಮಗ್ರವಾದ ಮುಸ್ಲಿಮ್ ಕಾಯಿದೆಯನ್ನು ಅಂಗೀಕರಿಸಲು ಅನುಕೂಲ ಮಾಡಿಕೊಡುವ ಒಂದು ಬಿಲ್ಲನ್ನು ಅಮೀರ್ ಆಲಿ ತಂದರು. ಆಗ ಅದು ಕಾಯಿದೆ ಆಗಲಿಲ್ಲ. ಆದರೆ ಅದು 1937ರಲ್ಲಿ ಕಲ್ಕತ್ತೆಯ ವಿಶ್ವವಿದ್ಯಾನಿಲಯ ಇವರನ್ನು ಟ್ಯಾಗೋರ್ ಲಾ ಪ್ರೊಫೆಸರ್ ಎಂದು ಗೌರವಿಸಿತು. ಅಲ್ಲಿ ಅವರು ಕೊಟ್ಟ ವ್ಯಾಖ್ಯಾಗಳು ಮುಸ್ಲಿಮರ ಕಾಯಿದೆಯ ಮೇಲಿನ ದೊಡ್ಡ ಆಧಾರಗ್ರಂಥಗಳಾಗಿವೆ. 1890ರಲ್ಲಿ ಅವರು ಕಲ್ಕತ್ತ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಹೊಂದಿದರು. ಮುಸ್ಲಿಮರ ವಕಫಾ (ಧಾರ್ಮಿಕ ಮಹಾದಾನ) ವಿಷಯದ ಮೇಲೆ ಅಬ್ದುಲ್ ಫತಾ ಮಹಮ್ಮದ ಪ್ರತಿ ರಾಸಮಯಾ (1894) ಮೊಕದ್ದಮೆಯಲ್ಲಿ 'ದಾನಕರ್ತೃವಿನ ಸಂತತಿ ಪಾರಂಪರ್ಯದ ಹಿತಕ್ಕಾಗಿ ಮಾಡುವ ದಾನವೂ ಧಾರ್ಮಿಕಮಹಾದಾನ ವಾಗುವುದೆಂದು ಆಲಿಯವರು ನ್ಯಾಯಾಧೀಶರಾಗಿ ಕೊಟ್ಟ ನಿರ್ಣಯ ಪ್ರೀವೀ ಕೌನ್ಸಿಲ್ಲಿಗೆ ಸಮ್ಮತವಾಗದಿದ್ದರೂ ಮುಸ್ಲಿಮ್ ಕಾಯಿದೆತಜ್ಞರ ಅನುಮೋದನೆ ಪಡೆಯಿತು. ಅನಂತರ 1913ರಲ್ಲಿ ಆದ ವಕ್ ಫಾ ಕಾಯಿದೆಯಲ್ಲಿ ಆ ಅಭಿಪ್ರಾಯ ಅಂಗೀಕೃತವಾಯಿತು. 1904ರಲ್ಲಿ ಹೈಕೋರ್ಟ್ ನ್ಯಾಯಾಧೀಶ ಪದವಿಯಿಂದ ನಿವೃತ್ತಿ ಹೊಂದಿದ ಅನಂತರ ಆಲಿ ಅವರು ಇಂಗ್ಲೆಂಡಿನಲ್ಲಿ ನೆಲೆಸಿದರು. 1909ರಲ್ಲಿ ಪ್ರೀವೀ ಕೌನ್ಸಿಲ್ಲಿನ ನ್ಯಾಯಾಧೀಶರಾದರು. ಇವರೇ ಈ ಗೌರವವನ್ನು ಹೊಂದಿದ ಮೊದಲ ಭಾರತೀಯರು. ಇವರ ವಿದ್ವತ್ಪೂರ್ಣ ನಿರ್ಣಯಗಳು, ಅನೇಕ ಜಟಿಲ ಕಾಯಿದೆಯ ವಿಷಯಗಳನ್ನು ವಿವರಿಸಿವೆ. ಇವರು ಹಿಂದೂಸ್ಥಾನದ ಕಾಯಿದೆಗಳಲ್ಲಿ ವಿಶೇಷತಃ ಹಿಂದೂ ಮುಸ್ಲಿಮ್ ಕಾಯಿದೆಗಳಲ್ಲಿ ಇಂಗ್ಲಿಷ್ ಕಾಯಿದೆಯ ಛಾಯೆಯನ್ನು ಕಾಣುವ ಹಾಗೂ ಅನುಸರಿಸುವ ಹಿಂದೂಸ್ಥಾನದ ಜಡ್ಜರ ಮನೋಧರ್ಮವನ್ನು ತೀವ್ರವಾಗಿ ಖಂಡಿಸಿದರು. ಸುನ್ನಿ ಮುಸ್ಲಿಮರ ಕಾಯಿದೆಯಂತೆ ಬಂದ ರಕ್ಷಕತ್ವದ ಹಕ್ಕು ಹೊಣೆಗಾರಿಕೆ, ಮಕ್ಕಳ ಔರಸತ್ವ ಅಂಗೀಕಾರ-ಇವುಗಳ ಮೇಲಿನ ಆಲಿಯವರ ನಿರ್ಣಯ ಪ್ರಸಿದ್ಧವೂ ಎಲ್ಲೆಡೆಯಲ್ಲಿ ಉದ್ಧøತವೂ ಆಗಿವೆ. ವಿಬುಧಪ್ರಿಯ ತೀರ್ಥ ಸ್ವಾಮಿಯರ್ ಮತ್ತು ವೇದಾಚಲ ಮೊದಲಿಯಾರ್ ವಿದ್ಯಾವರೂಢಿ-ಇವರ ಮೊಕದ್ದಮೆಗಳಲ್ಲಿ ಹಿಂದೂಮಠಗಳ ಸ್ವರೂಪ, ಮಠಾಧಿಪತಿಗಳ ಅಧಿಕಾರ, ಬಂಧುಗಳಲ್ಲಿ ವಾರಸಾನಿರ್ಣಯ ಮೊದಲಾದ ಮಹತ್ತ್ವದ ಹಿಂದೂ ಕಾಯಿದೆಗಳ ಬಗ್ಗೆ ಇವರು ನೀಡಿದ ತೀರ್ಪುಗಳು ಇಂದಿಗೂ ಮೈಲಿಗಲ್ಲುಗಳಾಗಿವೆ. ಅಲ್ಲದೆ ಬಂಗಾಳದ ಜಮೀನುದಾರೀ ವಿಷಯದಲ್ಲೂ ಪುರಾವೆಗಳ ಕಾಯಿದೆಗಳಲ್ಲೂ ಅನೇಕ ಮಹತ್ತ್ವದ ನಿರ್ಣಯಗಳನ್ನಿತ್ತಿದ್ದಾರೆ. 1928ನೆಯ ಆಗಸ್ಟ್ ತಿಂಗಳಿನಲ್ಲಿ ಇವರು ಮಹಮಡನ್ ಜ್ಯೂರಿಸ್ ಪ್ರೂಡೆನ್ಸ್ (ಮಹಮ್ಮದೀಯ ಕಾಯಿದೆ ತತ್ತ್ವಗಳು), ದಿ ಪರ್ಸನಲ್ ಲಾ ಆಫ್ ಮಹಮಡನ್ಸ್ (ಮುಸಲ್ಮಾನರ ವೈಯಕ್ತಿಕ ಕಾಯಿದೆ), ದಿ ಕ್ರಿಟಿಕಲ್ ಎಕ್ಸಾಮಿನೆಷನ್ ಆಫ್ ದಿ ಲೈಫ್ ಅಂಡ್ ಟೀಚಿಂಗ್ಸ್ ಆಫ್ ಮಹಮ್ಮದ್ (ಪೈಗಂಬರರ ಬೋಧನೆ ಮತ್ತು ಜೀವನದ ವಿಮರ್ಶಾತ್ಮಕ ಸಮೀಕ್ಷೆ) ಹಾಗೂ ಸ್ಪಿರಿಟ್ ಆಫ್ ಇಸ್ಲಾಂ (ಮಹಮ್ಮದೀಯ ತತ್ತ್ವದ ತಿರುಳು), ಪುರಾವೆ ಕಾಯಿದೆ ಮೊದಲಾದ ಅನೇಕ ಉದ್ಗ್ರಂಥಗಳನ್ನು ಬರೆದಿದ್ದಾರೆ.

	ಮುಸ್ಲಿಮರಿಗೆ ಪಾಶ್ಚಾತ್ಯ ರಾಜಕೀಯ ತಂತ್ರಗಳನ್ನು ತಿಳಿಸಲು ಹಾಗೂ ಅವರ ಆಸಕ್ತಿಗಳನ್ನು ಕಾಪಾಡಲು ಅಲಿಯವರು ನ್ಯಾಷನಲ್ ಮಹವiಡನ್ ಅಸೋಸಿಯೇಷನ್ ಅನ್ನು ಸ್ಥಾಪಿಸಿದರು (1877). ಭಾರತೀಯ ರಾಷ್ಟ್ರೀಯತೆಯ ಸೋಗಿನಲ್ಲಿ ಹಿಂದೂಗಳು ಪ್ರಬಲರಾಗುವುದನ್ನು ತಡೆಗಟ್ಟಲು ಭಾರತದಲ್ಲಿ ಬ್ರಿಟಷ್ ಆಡಳಿತವನ್ನು ಎತ್ತಿಹಿಡಿದವರಲ್ಲಿ ಇವರೂ ಒಬ್ಬರು. ಮಾರ್ಲೆ ಮಿಂಟೊ ಸಲಹೆಗಳಂತೆ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆಗಳು ಜಾರಿಗೆ ಬರಲು ಇವರೂ ಪ್ರಯತ್ನಿಸಿದರು.			
 (ವಿ.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ